ಫೆಲಿನಿ, ಫೆಡರಿಕೊ
	1920. ಖ್ಯಾತ ಚಲನಚಿತ್ರ ನಿರ್ದೇಶಕ. ಹದಿನೈದು ವರ್ಷಗಳ ಅವಧಿಯಲ್ಲಿ ಕನಿಷ್ಠ ಐದು ಮಹಾನ್ ಚಿತ್ರ ನಿರ್ದೇಶಿಸಿದ ಏಕೈಕ ಸಾಹಸಿ. ಇಟಲಿ ರಾಷ್ಟ್ರದ ರಿಮಿನಿಯಲ್ಲಿ 1920 ಜನವರಿ 30ರಂದು ಜನನ. ಸರ್ಕಸ್ ಸೇರುವ ಆಸೆಯಿಂದ ಬಾಲ್ಯದಲ್ಲಿಯೇ ಶಾಲೆ ಬಿಟ್ಟ. ಕೆಲಸ ಹುಡುಕಿಕೊಂಡು ಫ್ಲಾರೆನ್ಸಿಗೆ ಬಂದು (1938) ಅಲ್ಲಿಯ ಹಾಸ್ಯ ನಿಯತಕಾಲಿಕವೊಂದರಲ್ಲಿ ವ್ಯಂಗ್ಯಚಿತ್ರಕಾರನಾಗಿ ಕೆಲಸ ಮಾಡಿದ. ಪತ್ರಿಕೋದ್ಯಮಿಯಾಗಬೇಕೆಂಬ ಅಭಿಲಾಷೆಯಿಂದ ರೋಮ್ ನಗರಕ್ಕೆ ಬಂದ(1939). ಮಾರ್ಕ್ ಅರೆಲಿಯೊ ಪತ್ರಿಕೆಗೆ ಸಂಪಾದಕನಾದ (1940). ರೇಡಿಯೋ ಕಾರ್ಯಕ್ರಮಗಳಿಗೆ ಸತತವಾಗಿ ಬರೆದು ಕೊಡುತ್ತಿದ್ದ (1943). ಪ್ರವಾಸಿ ಹಾಸ್ಯ ನಟರಿಗೆ ಬರಹಗಳನ್ನು ರಚಿಸಿಕೊಡುತ್ತಿದ್ದ. ಮಕಾರಿಯೊ ಎಂಬ ಹಾಸ್ಯನಟನ ಬರಹಗಾರ ಇವನೇ. 1930-40ರಲ್ಲಿ ಮಾರಿಯೊ ಮಟೇಲಿ ನಿರ್ದೇಶಿಸಿದ ಚಿತ್ರಗಳಲ್ಲಿ ಗಿಡುಗು ವಿನೋದಕರ್ತನಾಗಿಯೂ ಭಾಗವಹಿಸಿದ್ದ. 1941ರಿಂದ ಚಿತ್ರ ಕಥೆಗಳನ್ನು ಬರೆಯಲಾರಂಭಿಸಿದ. ಖ್ಯಾತ ನಿರ್ದೇಶಕ ರಾಬರ್ಟೊ ರೊಸಿಲಿನಿಯೊಡನೆ ಸಂಪರ್ಕ ಬಂದಮೇಲೆ ಚಲನಚಿತ್ರ ಮಾಧ್ಯಮದಲ್ಲಿ ಆಳ ಆಸಕ್ತಿ ಬೇರೂರಿತು. ರೊಸಿಲಿನಿಯ ಸಹ ನಿರ್ದೇಶಕನಾಗಿ ಮೂರು ಇಟಾಲಿಯನ್ ಚಿತ್ರಗಳಲ್ಲಿ ದುಡಿಯುವುದರೊಂದಿಗೆ ಒಂದರಲ್ಲಿ ಪಾತ್ರವನ್ನೂ ವಹಿಸಿದ. ನಿಯೊರಿಯಲಿಸ್ಪ್ ಚಿತ್ರಗಳಿಗೆ ಕಥೆಗಳನ್ನು ಬರೆದು ಹೆಸರು ಗಳಿಸಿದ ಪೈಕಿ ಅಂಥವುಗಳ ವಿವಾದಾಸ್ಪದವಾದ ದಿ ಮಿರಕಲ್ (1948) ಚಿತ್ರವೂ ಒಂದು. ವೆರೈಟಿ ಲೈಟ್ಸ್ (1950) ಚಿತ್ರಕ್ಕೆ ಈತ ಸಹನಿರ್ಮಾಪಕ ಹಾಗೂ ಸಹನಿರ್ದೇಶಕ. 1952ರಿಂದ ಸ್ವತಂತ್ರವಾಗಿ ಚಿತ್ರಗಳನ್ನು ನಿರ್ದೇಶಿಸತೊಡಗಿದ. ತನ್ನ ಎಲ್ಲ ಚಿತ್ರಗಳಿಗೂ ಕೊನೆಯ ಪಕ್ಷ ಭಾಗಶಃವಾದರೂ ತಾನೇ ಚಿತ್ರಕಥೆ ಬರಯುತ್ತಿದ್ದ. ಪರಂಪರಾಗತ ತಂತ್ರಗಳಿಗೆ ಹೊರತಾದ ಇವನ ಚಿತ್ರಗಳು ಆಧುನಿಕ ಜಗತ್ತಿನಲ್ಲಿ ಮಾನವನ ಒಂಟಿತನವನ್ನು ಎತ್ತಿ ಕಾಣಿಸುವ ಪ್ರಯತ್ನಗಳು. ಸಂಕೇತಗಳು ಇಡಿಕಿರಿದ ಚಿತ್ರಭಾಷೆಯಲ್ಲಿ ವಾಸ್ತವತೆ ಹಾಗೂ ಕನಸುಗಳ ಮಿಶ್ರಣದ ಸ್ವಚ್ಛಂದ ಕಥಾ ರಚನೆ ಇವನದು. ಜಾಗತಿಕ ಮನ್ನಣೆ ಗಳಿಸಿದ ಇವನ ಅತಿ ಪ್ರಸಿದ್ಧ ಚಿತ್ರಗಳೆಂದರೆ ಕಾವ್ಯಾತ್ಮಕವಾದ ಲಸ್ಟಡಾ (1954), ಸಮಾಜ ಟೀಕೆಯ ಪ್ರಭಾವೀ ಚಿತ್ರವಾದ ಲ ಡೋಲ್ಸ್ ವಿಟಾ (1960-ಮಧುರಜೀವನ), ಮತ್ತು ಕಲಾವಿದನ ಸ್ವಚಿತ್ರವಾದ 81/2 (1963). ಇನ್ನೆರಡು ಮಹಾನ್ ಚಿತ್ರಗಳೆಂದರೆ ಅನುಪಮ ಆತ್ಮಕಥಾ ಚಿತ್ರವಾದ ಐ ವಿಟೆಲೊನಿ (1953) ಮತ್ತು ಅಸಾಧಾರಣ ಫ್ಯಾಂಟಸಿ ಚಿತ್ರವಾದ ಸಟೈರಿಕಾನ್ (1969). ಮೂರು ದಶಕಗಳ ಅವಧಿಯಲ್ಲಿ ಈತ ನಿರ್ದೇಶಿಸಿರುವ 15 ಚಿತ್ರಗಳ ಪೈಕಿ ಮುಖ್ಯವಾದ ಇತರ ಇಟಾಲಿಯನ್ ಚಿತ್ರಗಳೆಂದರೆ ದಿ ಸ್ವಿಂಡಲ್ (1955), ನೈಟ್ಸ್ ಆಫ್ ಕಬಿರಿಯ (1956). ಬೊಕ್ಯಾಚಿಯೋ (1962), ಐ ಕ್ಲ್ಲಾನ್ಸ್ (1970). ಮತ್ತು ಆಮಶಕಾರ್ಡ್, ವಿಲಕ್ಷಣತೆಯೇ ಕೇಂದ್ರ ಪ್ರಜೆಯಾದ ಇವನ ಚಿತ್ರಗಳಲ್ಲಿ ಅಮೂರ್ತ ಅನಿಸಿಕೆ ಮತ್ತು ಅನುಭವಗಳಿಗೆ ಮೂರ್ತ ಅಭಿವ್ಯಕ್ತಿ; ಸಾಮಾಜಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಆಳ ವಿಶ್ಲೇಷಣೆ ಇರುತ್ತವೆ.
(ಎಸ್.ಎಸ್.ಎಂಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ